ಪೌಲಿ, ವೂಲ್ಫ್‍ಗ್ಯಾಂಗ್
	1900-1958. ಆಸ್ಟ್ರಿಯನ್ ಅಮೆರಿಕನ್ ಭೌತವಿಜ್ಞಾನಿ. ವಿಯೆನ್ನಾ ನಗರದಲ್ಲಿ 1900ರ ಏಪ್ರಿಲ್ 25 ರಂದು ಜನನ. ಬಾಲ್ಯ ವ್ಯಾಸಂಗ ನಡೆದುದ್ದೂ ಅಲ್ಲೇ. ಇವರ ತಂದೆ ವಿಯನ್ನ ವಿಶ್ವವಿದ್ಯಾಲಯದಲ್ಲಿ ಭೌತರಸಾಯನ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ಪ್ರೌಢಶಾಲೆಯ ಕೊನೆಯ ತರಗತಿಯಿಂದ ಹೊರಬರುವ ಹೊತ್ತಿಗಾಗಲೇ ತರುಣ ಪೌಲಿ ಐನ್‍ಸ್ಟೈನರ ಸಾರ್ವತ್ರಿಕ ಸಾಪೇಕ್ಷತಾಸಿದ್ಧಾಂತದ ಪರಿಚಯವನ್ನು ಪಡೆದುಕೊಂಡಿದ್ದರು. ಕಾಲೇಜ್ ಶಿಕ್ಷಣವನ್ನು ಇವರು ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಪಡೆದರು. ಆರ್ನಾಲ್ಡ್ ಸಾಮರ್‍ಫೆಲ್ಡರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪೌಲಿ 1921ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದರು. ಇವರಿನ್ನೂ ವಿದ್ಯಾರ್ಥಿಯಾಗಿದ್ದಾಗ ಸಾಮರ್‍ಫೆಲ್ಡರ ಸೂಚನೆ ಮೇರೆಗೆ ಹ್ಯಾಂಡ್‍ಬುಕ್ ಡರ್ ಫಿಸಿಕ್ಸಿಗಾಗಿ ಸಾಪೇಕ್ಷತಾ ಸಿದ್ಧಾಂತದ ಮೇಲೆ ಬರೆದ 200 ಪುಟಗಳ ಪ್ರಬಂಧ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಸ್ವತಃ ಸಾಮರ್‍ಫೆಲ್ಡರೇ ಐನ್‍ಸ್ಟೈನರಿಗೆ ಪೌಲಿಯವರ ಈ ಲೇಖನದ ಬಗ್ಗೆ ಪ್ರಶಂಸೆಯ ಮಾತು ಬರೆದಿದ್ದರು. ಸಾಪೇಕ್ಷತಾ ಸಿದ್ಧಾಂತದ ಬಗ್ಗೆ ಪ್ರಭುತ್ವ ಸಂಪಾದಿಸಲು ಇಚ್ಛಿಸುವ ಎಲ್ಲರೂ ಗಮನಿಸಲೇಬೇಕಾದ ಪ್ರೌಢ ಪರಿಚಯ ಲೇಖನವಿದು. 

	1922ರಲ್ಲಿ ಪೌಲಿ ಗಟಿಂಗೆನ್ನಿನಲ್ಲಿ ಮ್ಯಾಕ್ಸ್ ಬಾರ್ನ್ ಅವರ ಜೊತೆಯಲ್ಲಿಯೂ ಮರು ವರ್ಷ ಕೋಪನಹೇಗನ್ನಿನಲ್ಲಿ ನೀಲ್ಸ್‍ಬೋರ್ ಅವರ ಜೊತೆಯಲ್ಲಿಯೂ ಕೆಲಸ ಮಾಡಿದರು. ಆ ವರ್ಷದ ಕೊನೆಯಲ್ಲಿ ಇವರು ಹ್ಯಾಂಬರ್ಗ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ನಿಯೋಜಿತರಾದರು. 1928 ರಲ್ಲಿ ಝೂರಿಕ್ಕಿನ ಫೆಡರಲ್ ತಂತ್ರ ವಿದ್ಯಾಕೇಂದ್ರದಲ್ಲಿ ಸೈದ್ಧಾಂತಿಕ ಭೌತ ವಿಜ್ಞಾನದ ಪ್ರಾಧ್ಯಾಪಕರಾಗಿ ಅಧಿಕಾರ ಸ್ವೀಕರಿಸುವ ತನಕವೂ ಹ್ಯಾಂಬರ್ಗ್ ವಿಶ್ವವಿದ್ಯಾಲಯದಲ್ಲಿಯೇ ಇದ್ದರು. ಪೌಲಿಯವರ ಮಾರ್ಗದರ್ಶನದಲ್ಲಿ ಝೂರಿಕ್ ಫೆಡರರ್ ತಂತ್ರ ವಿದ್ಯಾಕೇಂದ್ರ ಸೈದ್ಧಾಂತಿಕ ಭೌತ ವಿಜ್ಞಾನದ ಪ್ರಬಲ ಕೇಂದ್ರವಾಯಿತು. ಮುಂದೆ ಪ್ರಸಿದ್ಧಿಗೆ ಬಂದ ಆರ್. ಕ್ರೋನಿಗ್ ರುಡಾಲ್ಫ್ ಪೇಲ್ಲ್ರ್ಸ್, ಕ್ಯಾಸಿಮರ್, ವೀಸ್‍ಕಾಫ್ ಮುಂತಾದ ವಿದ್ವಾಂಸರು ಇಲ್ಲಿ ಪೌಲಿಯವರ ಸಹಾಯಕರಾಗಿದ್ದರು. 

	ಪೌಲಿ ಎಂದೂ ಒಳ್ಳೆಯ ಬೋಧಕರೆಂಬ ಹೆಸರು ಪಡೆದವರಲ್ಲ. ಅವರು ಕರಿ ಹಲಗೆ ಮೇಲೆ ಬರೆಯುತ್ತಿದ್ದುದು ತರಗತಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಅವರ ಮಾತೆಂದರೆ ತಮ್ಮಷ್ಟಕ್ಕೆ ತಾವು ಗೊಣಗಿಕೊಳ್ಳುವುದು ಮಾತ್ರ. ವಿದ್ಯಾರ್ಥಿಗಳಿಗೆ ಅವರ ಪ್ರೌಢಿಮೆಯ ಲಾಭ ದೊರೆಯುತ್ತಿದ್ದುದು ತರಗತಿಯ ಹೊರಗಿನ ಸಂಭಾಷಣೆಗಳಲ್ಲಿ. ಆಗ ಅವರು ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆಗಳು ಹೊಸ ಭಾವನೆಗಳು ಅಂಕುರಿಸಲು ನೆರವಾಗುತ್ತಿದ್ದರು. ಈ ದೃಷ್ಟಿಯಲ್ಲಿ ಪೌಲಿ ನಿಜಕ್ಕೂ ಸಾಕ್ರೆಟೀಸನಿಗೆ ಹತ್ತಿರದ ಬೋಧಕರೆನ್ನಬಹುದು. 

	ಶುದ್ಧ ಸೈದ್ಧಾಂತಿಕ ವಿಜ್ಞಾನಿಯಾಗಿದ್ದ ಪೌಲಿಯವರಿಗೆ ಪ್ರಯೋಗಗಳ ವಿಚಾರವಾಗಿ ಎಳ್ಳಷ್ಟೂ ಆಸಕ್ತಿ ಇರಲಿಲ್ಲ. ಈ ಅನಾಸಕ್ತಿ ಎಷ್ಟರ ಮಟ್ಟಿಗೆ ಹೋಗಿತ್ತೆಂದರೆ ಇವರೇನಾದರೂ ಪ್ರಯೋಗಗಳು ನಡೆಯುತ್ತಿರುವ ಕಡೆಗೆ ಬಂದುದಾದರೆ ಅಲ್ಲಿದ್ದ ಉಪಕರಣಗಳೆಲ್ಲವೂ ಸ್ತಬ್ಧವಾಗುತ್ತಿದ್ದುವು ಅಥವಾ ಅಡ್ಡಾದಿಡ್ಡಿ ವರ್ತಿಸುತ್ತಿದ್ದುವು ಎಂಬುದಾಗಿ ಇವರ ಸಹೋದ್ಯೋಗಿಗಳು ಗೇಲಿ ಮಾಡುತ್ತಿದ್ದುದಿತ್ತು. ಪೌಲಿಯವರ ಪ್ರವೇಶದೊಂದಿಗೆ ಉಪಕರಣಗಳಲ್ಲಿ ಆಗುತ್ತಿದ್ದ ಅನಪೇಕ್ಷಿತ ಬದಲಾವಣೆಯನ್ನು ಪೌಲಿ ಪರಿಣಾಮ ಎಂದು ಕರೆಯುವುದೂ ವಾಡಿಕೆಯಾಗಿತ್ತು. ಇದೆಲ್ಲ ಲಘು ಹಾಸ್ಯದ ಮಾತಾಗಿತ್ತೆಂಬುದನ್ನು ಮಾತ್ರ ಯಾರೂ ಮರೆಯಬಾರದು.

	ಪೌಲಿ ಇತರರ ಅಭಿಪ್ರಾಯಗಳನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ವಾದದಲ್ಲಿ ಇವರು ಪ್ರತಿವಾದಿ ಭಯಂಕರರೇ ಎನಿಸಿದ್ದರು. ಹೀಗಾಗಿ ಇವರೊಂದಿಗೆ ಚರ್ಚೆ ಮಾಡಲು ವಿಜ್ಞಾನಿಗಳು ಅಂಜುತ್ತಿದ್ದರು. ಆದರೆ ಇವರನ್ನು ಬಲ್ಲವರಿಗೆ ಇಂಥ ಅಂಜಿಕೆ ಇರುತ್ತಿರಲಿಲ್ಲ. ಪೌಲಿಯವರ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಇವರ ಒಪ್ಪಿಗೆ ಪಡೆಯಲು ಅವರೆಲ್ಲರೂ ತವಕಿಸುತ್ತಿದ್ದರು. ಅಗ್ಗಿಷ್ಟಿಕೆಯಲ್ಲಿ ಹಾಕಿದ ಚಿನ್ನದಂತೆ ಯಾವುದೇ ವಿಚಾರವೂ ಇವರೊಂದಿಗೆ ಚರ್ಚಿಸಿದಾಗ ಹೊಸ ಮೆರುಗು ಪಡೆಯುತ್ತಿತ್ತು. ಸುಳ್ಳನ್ನು ನಿಜದ ತಲೆಯ ಮೇಲೆ ಹೊಡೆದಂತೆ ಹೇಳುವವರನ್ನು ಕಂಡರೆ ಪೌಲಿ ಕನಲಿ ಕೆಂಡವಾಗುತ್ತಿದ್ದರು. ಅರ್ಧಸತ್ಯವನ್ನು ಹೇಳುವುದು ಇವರ ಜಾಯಮಾನಕ್ಕೆ ಬಂದಿರಲೇ ಇಲ್ಲ. ಒಮ್ಮೊಮ್ಮೆ ಈ ನಿಷ್ಠುರ ಪ್ರಕೃತಿಯಿಂದ ಇವರು ತಪ್ಪು ಮಾಡುತ್ತಿದ್ದುದೂ ಇತ್ತು. ಫೈನ್‍ಮನ್ ಮತ್ತು ಡೈಸನ್ ಎಂಬವರ ಚಿತ್ರಗಣಿತದ ಬಗ್ಗೆ ಇವರು ತಾತ್ಸಾರ ಭಾವ ತಾಳಿದ್ದು ಇಂಥ ತಪ್ಪಿಗೆ ಒಂದು ನಿದರ್ಶನ.

	ಪೌಲಿಯವರ ಅಸಾಧಾರಣ ಬುದ್ಧಿಶಕ್ತಿಯನ್ನು ಗಮನಿಸಿ ಅನೇಕ ವಿಶ್ವವಿದ್ಯಾಲಯಗಳು ಇವರಿಗೆ ಸಂದರ್ಶಕ ಪ್ರಾಧ್ಯಾಪಕ ಹುದ್ದೆಯನ್ನು ನೀಡಿ ಗೌರವಿಸಿದುವು. 1935-36ರಲ್ಲಿ ಇವರು ಪ್ರಿನ್‍ಸ್ಟನ್ ವಿಶ್ವವಿದ್ಯಾಲಯದ ಪ್ರೌಢ ವ್ಯಾಸಂಗ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. 1931ರಲ್ಲಿ ಮಿಚಿಗನ್ ವಿಶ್ವವಿದ್ಯಾಲಯದಲ್ಲಿಯೂ 1941 ರಲ್ಲಿ ಪರ್ಡು ವಿಶ್ವವಿದ್ಯಾಲಯದಲ್ಲಿಯೂ ಇಂಥದೇ ಹುದ್ದೆಯನ್ನು ಹೊಂದಿದ್ದರು. 1940ರಲ್ಲಿ ಇವರು ಪ್ರೌಢ ವ್ಯಾಸಂಗ ಸಂಸ್ಥೆಯಲ್ಲಿ ಸೈದ್ಧಾಂತಿಕ ಭೌತ ವಿಜ್ಞಾನ ಪೀಠಕ್ಕೆ ನಿಯೋಜಿತರಾದರು. 1946ರಲ್ಲಿ ಅಮೆರಿಕ ಸಂಯುಕ್ತ ರಾಷ್ಟ್ರಗಳ ಪೌರತ್ವ ಪಡೆದರು. ಎರಡನೆಯ ಮಹಾಯುದ್ಧ ಕಳೆ ಮೇಲೆ ಇವರು ಝೂರಿಕ್ಕಿಗೆ ಹಿಂತಿರುಗಿ ಸ್ವಿಟ್ಜರ್‍ಲೆಂಡಿನ ಪೌರತ್ವ ಸ್ವೀಕರಿಸಿದರು.

	ಇವರ ಕೊಡುಗೆಗಳಲ್ಲಿ ಮಹತ್ತ್ವವುಳ್ಳವು ಮೂರು : ಬಹಿಷ್ಕರಣ ತತ್ತ್ವ (ಎಕ್ಸ್‍ಕ್ಲೂಶನ್ ಪ್ರಿನ್ಸಿಪಲ್), ನ್ಯೂಕ್ಲಿಯರ್ ಗಿರಕಿ (ನ್ಯೂಕ್ಲಿಯರ್ ಸ್ಪಿನ್) ಮತ್ತು ನ್ಯೂಟ್ರಿನೊ ವಾದ (ನ್ಯೂಟ್ರಿನೊ ಹೈಪಾಥಿಸಿಸ್). 1925ರಲ್ಲಿ ಇವರು ಬಹಿಷ್ಕರಣ ತತ್ತ್ವವನ್ನು ಪ್ರತಿಪಾದಿಸಿದರು. ಮೂಲ ರೂಪದಲ್ಲಿ ಇದರ ನಿರೂಪಣೆ ಹೀಗಿದೆ : ಯಾವುದೇ ಪರಮಾಣುವಿನಲ್ಲಿ ಎರಡು ಎಲೆಕ್ಟ್ರಾನುಗಳು ಒಂದೇ ಸ್ಥಿತಿಯಲ್ಲಿ ಇರುವುದಿಲ್ಲ. ವಿಲಕ್ಷಣ ಜೀಮಾನ್ ಪರಿಣಾಮದ ಅಧ್ಯಯನ ಫಲವಾಗಿ ಈ ತತ್ತ್ವವನ್ನು ಆವಿಷ್ಕರಿಸಿದರು.

	ಎಲೆಕ್ಟ್ರಾನ್ ಗಿರಕಿಯ ಕಲ್ಪನೆ ಇಲ್ಲದೆ ಇದ್ದುದರಿಂದ ಆಗ ಯಾವುದೇ ಎಲೆಕ್ಟ್ರಾನಿನ ಸ್ಥಿತಿಯನ್ನು ನಿರ್ಣಯಿಸಲು ಮೂರು ಕ್ವಾಂಟಮ್ ಸಂಖ್ಯೆಗಳನ್ನು ಬಳಸುತ್ತಿದ್ದರು. ಉಲೆನ್‍ಬೆಕ್ ಮತ್ತು ಗೌಡ್ಸ್‍ಮಿಕ್ ಎಂಬವರು ಎಲೆಕ್ಟ್ರಾನ್ ಗಿರಕಿಯ ಅಸ್ತಿತ್ವವನ್ನು ಸಾದರಪಡಿಸಿದ ಬಳಿಕ ಯಾವುದೇ ಎಲಕ್ಟ್ರಾನಿನ ಸ್ಥಿತಿಯನ್ನು ನಿರ್ಣಯಿಸಲು ನಾಲ್ಕು ಕ್ವಾಂಟಮ್ ಸಂಖ್ಯೆಗಳು ಬೇಕು ಎಂಬ ವಿಚಾರ ಮನದಟ್ಟಾಯಿತು. 1940 ರಲ್ಲಿ ಪೌಲಿಯವರೇ ಎಲೆಕ್ಟ್ರಾನ್ ಗಿರಕಿಗೂ ಬಹಿಷ್ಕರಣ ತತ್ತ್ವಕ್ಕೂ ಇರುವ ಸಂಬಂಧವನ್ನು ವಿವರಿಸಿದರು. ಗಿರಕಿಯನ್ನೂ ಒಳಗೊಂಡಂತೆ ಬಹಿಷ್ಕರಣ ತತ್ತ್ವವನ್ನು ಹೀಗೆ ನಿರೂಪಿಸಬಹುದು : ಯಾವುದೇ ಎರಡು ಎಲೆಕ್ಟ್ರಾನುಗಳು ನಾಲ್ಕು ಕ್ವಾಂಟಮ್ ಸಂಖ್ಯೆಗಳಿಗೆ ಅನನ್ಯ ಮೌಲ್ಯಗಳನ್ನು ಹೊಂದಿರುವುದಿಲ್ಲ.

	ಎಲೆಕ್ಟ್ರಾನಿನ ಸ್ಥಿತಿಯನ್ನು ನಿರ್ಣಯಿಸಲು ಬೇಕಾದ ನಾಲ್ಕು ಕ್ವಾಂಟಮ್ ಸಂಖ್ಯೆಗಳು ಟಿ, ಟ, m1 ಮತ್ತು m8. ಪ್ರಧಾನ ಕ್ವಾಂಟಮ್ ಸಂಖ್ಯೆ ಟಿ ಪಡೆಯಬಹುದಾದ ಮೌಲ್ಯಗಳು 1, 2, 3, 4.... ಕೋನೀಯ ಸಂವೇಗ ಕ್ವಾಂಟಮ್ ಸಂಖ್ಯೆ ಟ ಪ್ರಧಾನ ಕ್ವಾಂಟಮ್ ಸಂಖ್ಯೆಗಿಂತ ಒಂದು ಕಡಿಮೆಯಾಗಿ ಇರಬಹುದು. ಕಾಂತೀಯ ಕೋನೀಯ ಸಂವೇಗ ಕ್ವಾಂಟಮ್ ಸಂಖ್ಯೆ m1 ಪಡೆಯಬಹುದಾದ ಮೌಲ್ಯಗಳು - ಟ, - (ಟ - 1) . . . . . . 0, 1, 2, . . . . .( ಟ -1), ಟ. ಕಾಂತೀಯ ಗಿರಕಿ ಕ್ವಾಂಟಮ್ ಸಂಖ್ಯೆ m8 ಎರಡು ಮೌಲ್ಯಗಳನ್ನು ಮಾತ್ರ ಪಡೆಯಬಹುದು. ಇವು +1/2 ಮತ್ತು-1/2.

ಆಂತರಿಕ ಗಿರಕಿ 1/2ħ ಇರುವ ಎಲ್ಲ ಕಣಗಳೂ ಪೌಲಿ ಬಹಿಷ್ಕರಣ ತತ್ತ್ವವನ್ನು ಪಾಲಿಸುತ್ತವೆ. ಪರಮಾಣುಗಳಲ್ಲಿ ಎಲೆಕ್ಟ್ರಾನ್ ಚಿಪ್ಪು ರಚನೆಯನ್ನು ತಿಳಿಯಲೂ ನ್ಯೂಕ್ಲಿಯಸುಗಳಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನುಗಳ ಜೋಡಣೆಯನ್ನು ತಿಳಿಯಲೂ ಬಹಿಷ್ಕರಣ ತತ್ತ್ವ ನೆರವಾಗುತ್ತದೆ. ಲೋಹಗಳಲ್ಲಿ ಸ್ವತಂತ್ರವಾಗಿ ಚಲಿಸುವ ಎಲೆಕ್ಟ್ರಾನುಗಳನ್ನೂ ನಕ್ಷತ್ರಗಳಲ್ಲಿ ಕಣಗಳು ತೆಕ್ಕೆ ಬೀಳವುದನ್ನೂ ಅರ್ಥ ಮಾಡಿಕೊಳ್ಳಲು ಬಹಿಷ್ಕರಣ ತತ್ತ್ವ ಅಗತ್ಯ. ಇದರ ಆವಿಷ್ಕಾರಕ್ಕಾಗಿ ಪೌಲಿಯವರಿಗೆ 1945 ರ ಭೌತ ವಿಜ್ಞಾನದ ನೋಬಲ್ ಪಾರಿತೋಷಿಕ ದೊರೆಯಿತು. 

1930 ಡಿಸೆಂಬರ್ 4 ರಂದು ಲೈಸ್ ಮೀಟ್ನರ್ ಅವರಿಗೆ ಬರೆದ ಕಾಗದದಲ್ಲಿ ಪೌಲಿ ನ್ಯೂಟ್ರಿನೊ ವಾದವನ್ನು ಸ್ಪಷ್ಟವಾಗಿ ವಿವರಿಸಿದರು. ಬೀಟ ಕ್ಷಯದಲ್ಲಿ ನ್ಯೂಕ್ಲಿಯಸ್ ಬೀಟ ಕಣವನ್ನು (ಎಲೆಕ್ಟ್ರಾನನ್ನು) ಹೊರದೂಡಿ ಹಿನ್ನೆಗೆಯುತ್ತದೆ. ಹೀಗಿರುವಾಗ ಹೊರಬಂದ ಕಣ ಯಾವಾಗಲೂ ಒಂದೇ ಮೌಲ್ಯದ ಶಕ್ತಿಯನ್ನು ಹೊಂದಿರಬೇಕಾದದ್ದು ಸಹಜ. ಆದರೆ, ವಸ್ತುಸ್ಥಿತಿ ಹೀಗಲ್ಲ ; ಬೀಟ ಕಣಗಳು ಒಂದೇ ಮೌಲ್ಯದ ಶಕ್ತಿಯನ್ನು ಹೊಂದಿರದೆ ಶೂನ್ಯ ಶಕ್ತಿಯಿಂದ ಹಿಡಿದು ಎರಡೇ ಕಣಗಳು ಈ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರೆ ಯಾವ ಶಕ್ತಿಯನ್ನು ಪಡೆಯಬಹುದಾಗಿತ್ತೋ ಆ ಗರಿಷ್ಠದ ವರೆಗಿನ ಎಲ್ಲ ಶಕ್ತಿಯನ್ನೂ ಹೊಂದಿದ ಅವಿಚ್ಛಿನ್ನ ಶಕ್ತಿ ಹಂಚಿಕೆಯನ್ನು ಪಡೆದಿರುತ್ತವೆ. ಒಂದು ಬೀಟ ಕಣದ ಸರಾಸರಿ ಶಕ್ತಿ ಅದು ಪಡೆಯಬಹುದಾದ ಕೊನೆಬಿಂದು ಶಕ್ತಿಯ 1/3 ರಷ್ಟು ಇರುತ್ತದೆ ಎಂಬುದನ್ನು ಎಲ್ಲಿಸ್ ಮತ್ತು ವೂಸ್ಟರ್ ಅಳೆದು ತೋರಿಸಿದರು. ಶಕ್ತಿ ನಷ್ಟವಾಗುವುದರ ಜೊತೆಗೆ ಈ ಕ್ರಿಯೆಯಲ್ಲಿ ಕೋನೀಯ ಸಂವೇಗ ನಿತ್ಯವಾಗಿರದೆ ಇರುವುದೂ ಕಂಡಿತು. ಬೇರೆ ದಾರಿ ಕಾಣದೆ ನೀಲ್ಸ್‍ಬೋರ್ ಸಹಿತವಾಗಿ ವಿಜ್ಞಾನಿಗಳು ಬೀಟ ಕ್ಷಯದಲ್ಲಿ ಶಕ್ತಿ ಮತ್ತು ಕೋನೀಯ ಸಂವೇಗ ನಿತ್ಯತ್ವ ತತ್ತ್ವಗಳು ಭಂಗಗೊಳ್ಳಬಹುದು ಎಂಬ ನಿರ್ಧಾರಕ್ಕೆ ಬರುವ ಸಂಭವವಿತ್ತು. ಇಂಥ ಸಂಧಿಗ್ಧ ಸಮಯದಲ್ಲಿ ಶಕ್ತಿ ಮತ್ತು ಕೋನೀಯ ಸಂವೇಗ ನಿತ್ಯತ್ವ ತತ್ತ್ವಗಳು ಅಚರವೆಂದೂ ಬೀಟ ಕ್ಷಯದಲ್ಲಿ ವಿಶ್ವವ್ಯಾಪಿಯಾದ ಈ ತತ್ತ್ವಗಳು ಭಂಗಗೊಳ್ಳುವಂತೆ ತೋರುವುದು ವಿದ್ಯುದ್ರಹಿತ ಮೂರನೆಯ ಕಿರುಕಣವೊಂದು ಹುಟ್ಟಿಕೊಳ್ಳುವುದರಿಂದ ಎಂದೂ ಪೌಲಿ ವಾದಿಸಿದರು. ಇದಕ್ಕೆ ನ್ಯೂಟ್ರಿನೊ (ಚಿಕ್ಕ ನ್ಯೂಟ್ರಾನ್) ಎಂದು ಹೆಸರಿಟ್ಟು ಎನ್ರಿಕೊ ಫರ್ಮಿ ಬೀಟ ಕ್ಷಯದಲ್ಲಿ ಕ್ವಾಂಟಮ್ ಬಲವೈಜ್ಞಾನಿಕ ಸಿದ್ಧಾಂತವನ್ನು ಮಂಡಿಸಿದರು. ಇದು ಬೀಟ ಕಣಗಳ ಅವಿಚ್ಛಿನ್ನ ಶಕ್ತಿ ಹಂಚಿಕೆಯನ್ನು ವಿವರಿಸಿದ್ದಲ್ಲದೆ ಕೊನೆಬಿಂದು ಶಕ್ತಿಯನ್ನು ಅಳೆಯಲೂ ಅನುವಾಯಿತು. ಇಷ್ಟಾದರೂ ನ್ಯೂಟ್ರಿನೊಗಳನ್ನು ಪತ್ತೆ ಹಚ್ಚುವ ಕೆಲಸ ಬೇಗ ಆಗಲಿಲ್ಲ. ಇದು 1956 ರಲ್ಲಿ ಸಿದ್ಧಿಸಿತು. ಕೊವೆನ್ ಮತ್ತು ರೀನ್ಸ್ ಇದರ ಆವಿಷ್ಕರ್ತೃಗಳು.
ಪೌಲಿ 1958 ಡಿಸೆಂಬರ್ 15 ರಂದು ಗತಿಸಿದರು.
(ಎಸ್.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ